ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ.
ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸದೆ ಜೈ ಎಂದಿದ್ದೆ.
ಕೇದಾರನಾಥ ಹೋಗುವ ಸಿದ್ದತೆ ನಡೆದಿತ್ತು. ಹಾಗೆ ನಾನು ಕೆಲಸವನ್ನು ಬಿಟ್ಟಾಯಿತು. ನಾನು ಹೋಗುವುದಷ್ಟೇ ಮುಂಗಡ ಬುಕ್ ಮಾಡಿದ್ದೆ, ತಿರುಗಿ ಬರುವುದನ್ನು ಮಾಡಿರಲಿಲ್ಲ. ನಾನು ದೆಹಲಿಯಿಂದ ಒಂದಿಷ್ಟು ದಿನ ತಿರುಗಿ ಬಂದರಾಯಿತು ಎಂದು ಕೊಂಡೆ. ನಂತರ ಅಪ್ಪ ಅಮ್ಮನಿಗೆ ಕಾಶಿಯ ದರ್ಶನ ಮಾಡಿಸಬೇಕು ಎಂದು ಕಳೆದ ಎರಡು ವರ್ಷದಿಂದ ಅಂದುಕೊಳ್ಳುತ್ತಿದ್ದೆ. ಪ್ರತಿ ಬಾರಿಯೂ ಅವರಿಗೆ ಮುಗಿಯದ ತಾಪತ್ರಯ. ನೋಡೋಣ ಎಂದು ಈ ಬಾರಿ ಕೇಳಿದೆ. ಎರಡು ದಿನ ಕೊಡು ಹೇಳ್ತೀವಿ ಅಂದರೂ, ಒಂದಿಷ್ಟು ಇಲ್ಲ ಸಲ್ಲದ ಸಬೂಬುಗಳು ಇತ್ತು. ಹೇಗೋ ಒಪ್ಪಿಸಿ ಆಯಿತು. ಜೊತೆಗೆ ದೊಡ್ಡಪ್ಪ ದೊಡ್ಡಮ್ಮನು ಬರುವುದಾಗಿ ಎಂದಾಗ ಎದೆಯಲ್ಲಿ ಸಣ್ಣ ನಡುಕ ಶುರು ಆಯಿತು. ನಾನೊಬ್ಬಳೆ ಎಲ್ಲರನ್ನೂ ನಿಭಾಯಿಸಬಲ್ಲೆನೆ ಎಂದು. ಎಲ್ಲರೂ ೬೦ ರ ಮೇಲಿನವರು, ಬಿಪಿ ಶುಗರ್ ಎಲ್ಲರ ಫ್ರೆಂಡ್. ಅಷ್ಟಲ್ಲದೇ ನಾಲ್ವರಿಗೂ ಕನ್ನಡ ಬಿಟ್ಟು ಬೇರೆ ಭಾಷೆ ಬರದು, ಮೊಬೈಲ್ ಫೋನ್ ಬಳಸುವ ವಿಧಾನ ತಿಳಿದಿದ್ದು ಅಷ್ಟಕ್ಕಷ್ಟೇ. ಅದರ ನಡುವೆ ನನಗೆ ಅವರಿಗೆ ಒಂದಿಷ್ಟು ಜಾಗ ತೋರಿಸ ಬೇಕು ಎಂಬ ಹುಚ್ಚು. ಅವರ ಎಲ್ಲ ಬೆಳಗ್ಗೆ ಅಡಿಕೆ ಮರದ ಮುಂದೆಯೆ ಆಗಿದೆ, ಒಂದಿಷ್ಟು ಜಾಗ ನೋಡಲಿ ಎಂಬ ಬಯಕೆ ಇತ್ತು. ಮೊದಲು ಮಾಡಿದ್ದ ಒಂದಿಷ್ಟು plan ಬದಲಾಯಿಸಿದೆ. ಆದರೂ ಸುಮಾರು ಜಾಗಗಳು ಇತ್ತು. ಇನ್ನೇನು ಕೇದಾರನಾಥ ಹೊರಡಲು 4 ದಿನ ಇದ್ದಾಗ ಹೋಗುವುದು ರದ್ದಾಯಿತು. ಮನೆಯವರೆಲ್ಲರ ವಿಮಾನ ಬುಕ್ ಆಗಿತ್ತು. ನಾನೇನು ಮಾಡಲಿ, ಒಬ್ಬಳೇ ರೈಲಲ್ಲಿ ಅಷ್ಟು ದೂರ ಹೋಗಲು ಮನಸ್ಸಾಗಲಿಲ್ಲ. ಹೋಗುವುದನ್ನು ನಿಲ್ಲಿಸೋಣ ಎಂದರೆ, ಆಗಲೇ 60000 ಮೇಲೆ, ಹೋಗುವ ಬರುವ ಎಲ್ಲಾ ಬುಕಿಂಗ್ ಆಗಿತ್ತು. ಸರಿ ಎಂದು ನಾನು ಅವರೊಟ್ಟಿಗೆ ವಿಮಾನ ಬುಕ್ ಮಾಡಿದೆ ಹುಬ್ಬಳ್ಳಿಯಿಂದ. ಹುಬ್ಬಳ್ಳಿಗೆ
ಹೊರಡುವ ದಿನ, ಹಾಗೂ ದೆಹಲಿಗೆ ತೆರಳುವ ದಿನ insomnia ಆದ ಹಾಗಿತ್ತು, ರಾತ್ರಿಯಿಡೀ ನಿದ್ದೆ ಇಲ್ಲ. Tension ಗೊತ್ತಿಲ್ಲ, ಆದರೆ ನಿದ್ದೆ ಸುಳಿಯುತ್ತಿರಲಿಲ್ಲ. ನನಗೆ ಇತ್ತೀಚೆಗೆ ಹಾಗೆ ಸ್ವಲ್ಪ ಶಬ್ದ, ಜಾಗ ಬದಲಾವಣೆ ಎಲ್ಲಾ ನಿದ್ದೆ ಇಲ್ಲದಹಾಗೆ ಮಾಡುತ್ತಿತ್ತು. ನಾನು ನನ್ನ ಸ್ನೇಹಿತೆಯಿಬ್ಬರು ಹೇಳಿಕೊಂಡು ನಗುತ್ತಿದ್ದೆವು. ನೋಡು ವಯಸ್ಸಾಯ್ತೆ ಎಂದು.
ಹಾಗೆ ಎನೋ ಭಯ, ಅತ್ತೆ ಮಾತ್ರ ಭಾರಿ ಭಾರಿಗೂ ಧೈರ್ಯ ತುಂಬುತ್ತಿದ್ದರು. ನಮ್ಮ ಬ್ಯಾಗನ್ನು ತೂಕ ಹಾಕಿ ಹಾಕಿ, ಮತ್ತೆ ಅವರ ಬ್ಯಾಗಲ್ಲಿ ಏನಾದರೂ ಕ್ಯಾಬಿನ್ ಬ್ಯಾಗ ಲಿ ಇರಬಹುದಾದ್ದು ಲಗೇಜ್ ಬ್ಯಾಗ ಲಿ ಇದೆಯಾ ಎಂದು ನೋಡಿ, ನೋಡಿ, ಹೊರಟಾಯಿತು. ನಾನು ವಿಮಾನ ನಿಲ್ದಾಣದಲ್ಲಿ ನಡೆವ ಪ್ರತಿ ಹಂತದ procedure ನ್ನು ಅಪ್ಪ ಅಮ್ಮ ನಿಗೆ ಹೇಳುತ್ತಾ ಬಂದೆ. ಯಾಕೆಂದರೆ ವಾಪಸ್ ಬರುವಾಗ ಅವರು ತಾವೇ ನಿಭಾಯಿಸಿಕೊಳ್ಳ ಬೇಕಿತ್ತು. ನಾನು return ticket ಬುಕ್ ಮಾಡಿರಲಿಲ್ಲ. ಅಮ್ಮ ಅಪ್ಪ ಮೊದಲ ಬಾರಿಗೆ ವಿಮಾನ ಹತ್ತಿದ್ದರು. ಅಪ್ಪನಿಗೆ windowಸೀಟು ಬಂದಿತ್ತು. ಮಕ್ಕಳ ಹಾಗೆ ಮೇಲಿಂದ ನೋಡುತ್ತಿದ್ದರು. ದೆಹಲಿ ತಲುಪುವ ವರೆಗೂ ಹಾಗೆ ಒಮ್ಮೆ ಅಮ್ಮ, ಅಪ್ಪ ಕಿಟಕಿಯಿಂದ ನೋಡುತ್ತಲೆ ಇದ್ದರು
Comments
Post a Comment