ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ನೀವು ಓದುತ್ತಿರುವುದು AIR memory
ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. 
ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ.
ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು...
ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ಅಪ್ಪನ ಬಂದೋಬಸ್ತಲ್ಲೆ ಇರುತ್ತಿತ್ತು. ನಾನು ಶಾಲೆಗೆ ಹೋಗಲು ಪ್ರಾರಂಭಿಸದ ಮೇಲೆ ಅಲ್ಪ ಸ್ವಲ್ಪ license ಸಿಕ್ಕಿತು. ಬೆಳಗು- ಸಂಜೆ ಆಗುವುದೆ ಇದರೊಂದಿಗೆ ಎನ್ನುವಷ್ಟು ಹಚ್ಚಿಕೊಂಡಿದ್ದೆ. ದಿನ ಬೆಳಗ್ಗೆ ೫.೫೫ ಕ್ಕೆ ಬರುವ AIRದ ವಾದ್ಯ ಸಂಗೀತ ಕೇಳಿ ಎದ್ದರೆ, ರಾತ್ರಿ ೧೧.೦೫ ಕ್ಕೆ ಶುಭರಾತ್ರಿ ಕೇಳಿ ಮಲಗಿದರೆ ಸಮಾಧಾನ. ಎಷ್ಟೋ ಸಲ ಹಾಗೆ ಹಚ್ಚಿಕೊಂಡೇ ಮಲಗಿದ್ದು ಇದೆ. ಅಮ್ಮ ಮಧ್ಯೆ ಎದ್ದು ಬಂದ ಮಾಡಿ ಮಲಗುತ್ತಿದ್ದರು. ನನಗೆ ಬೇರೆ ಆಡಲು ಯಾರು ಇರಲಿಲ್ಲ. ರೇಡಿಯೋ ಹಿಡಿದು ಹೊರಟರೆ ಯಾವ ಭಯವೂ ಕಾಡುತ್ತಿರಲಿಲ್ಲ. ಒಂದು ಕೋಲು ಹಿಡಿದು, ರೇಡಿಯೋ ಬಗಲಿಗೆ ನೇತಾಡಿಸಿಕೊಂಡು ಹೊರಟರೆ ಮನೆಗೆ ಮರಳುವುದು ಸೂರ್ಯನಿಗೆ ವಿದಾಯ ಹೇಳಿಯೆ. ಕನ್ನಡದ ೫ ಆಕಾಶವಾಣಿ ಹಾಗು ಹಿಂದಿಯ ವಿವಿಧ ಭಾರತಿ ಕೇಂದ್ರದ ವಾರದ ಎಲ್ಲ ಕಾರ್ಯಕ್ರಮ ವಿವರಣೆ ಗೊತ್ತಿರುತ್ತಿತ್ತು. ಅದನ್ನ ತಿಳಿದುಕೊಳ್ಳುವುದರಲ್ಲೇನೊ ಮಜವಿತ್ತು. ರೇಡಿಯೋ ದಲ್ಲಿ commentary ಕೇಳಲು ಹಿಂದಿ, ಏಕ, ದೊ,ತೀನ ಕಲಿತೆ. ಅಪ್ಪ score ಹೇಳ್ತಿರಲಿಲ್ಲ. ಹಿಂದಿ dictionary ತರಿಸಿಕೊಂಡು ಗೇರು ಮರದಡಿ ಕುಳಿತು ಒಂದೆ ದಿನಕ್ಕೆ ಕಲಿತಿದ್ದೆ ೧೦೦ರ ವರೆಗೆ...
ಧಾರವಾಡ ಆಕಾಶವಾಣಿ, ದಿನ ಪೂರ್ಣ ಕೇಳಿದರೆ, ಮಂಗಳೂರು- ಭದ್ರಾವತಿ ಹಗಲೊತ್ತು ಕೇಳಲು ತುಂಬಾ ಸರ್ಕಸ್ ಮಾಡುತ್ತಿದ್ದೆ. IBX ಬೇಲಿಯ ತಂತಿಗಳನ್ನೆಲ್ಲಾ ಸುತ್ತಿ signal catch ಮಾಡಲು ಪ್ರಯತ್ನಿಸುತ್ತಿದ್ದೆ, ಹೀಗೆಲ್ಲಾ ಮಾಡುವಾಗ ಬಿದ್ದು ಕೋಮಾಕ್ಕೆ ಹೋದ ರೇಡಿಯೋಗಳೂ ಇವೆ. ಸುಮಾರು ರಿಪೇರಿ ಕಾರ್ಯ ನಾನೇ ಕಲಿತಿದ್ದೆ. ರಾತ್ರಿ ಮಾತ್ರ ಎಲ್ಲ ಕೇಂದ್ರಗಳು ಸರಿಯಾಗಿ ಕೇಳಿಸುತ್ತಿದ್ದವು.
ಧಾರವಾಡ ಆಕಾಶವಾಣಿಯಲ್ಲಿ, ಬರುತ್ತಿದ್ದ ವಾರಕ್ಕೊಮ್ಮೆ ೧೫ ನಿಮಿಷ ಬರುತ್ತಿದ್ದ ಧಾರವಾಹಿ, ಗಾಂಧಿ ಸ್ಮೃತಿ, ತಿಂಗಳ ಹಾಡು, (ಹಾ ತಿಂಗಳ ಹಾಡಲ್ಲಿ ಪ್ರಸಾರವಾದ ಹಾಡು, ನನ್ನ ಈ ಕೊರಳು, ನಿನ್ನ ಕೊಳಲಾಗಿ ಕೃಷ್ಣಾ ಭಾವ ಸಂಗಮವಾಗಲಿ...ಸಾಯೋಕ ನಿರ್ಧಾರ ಮಾಡಿದ್ಹಾಂಗ..ಮತ್ತೆ ಕೇಳಬೇಕೆನಿಸುತ್ತಿದೆ), ಕ್ವಿಜ್, ರೇಡಿಯೋ ಪಾಠ, ಮುಸ್ಸಂಜೆ ೬.೫೦ಕ್ಕೆ ಬರುವ ಕೃಷಿರಂಗದ ಪದ ಇನ್ನೂ ಹಾಗೆ ಇದೆ, ಅದು ಬಂದಾಕ್ಷಣ ದೇವರ ದೀಪ ಹಚ್ಚುತ್ತಿದ್ದಳು ಅಮ್ಮ. ರಾತ್ರಿ ೮ ,ಗಂಟೆಗೆ ಮಂಗಳೂರು ಆಕಾಶವಾಣಿಯಲ್ಲಿ ಕಥಾ ಮಂಜರಿ ಎಂಬ ಕಾರ್ಯಕ್ರಮ ಪ್ರತಿ ಬುಧವಾರ ಪ್ರಸಾರವಾಗಿತ್ತಿತ್ತು. ಕೇಳುಗರೆ ಕತೆ ಮುಂದುವರಿಸಬೇಕಿತ್ತು, ನಾನು ಬರೆಯುತ್ತಿದ್ದೆ, ಕಳಿಸುತ್ತಿರಲಿಲ್ಲ.ಆ ಕಥೆ ಓದುವ ಶೈಲಿ ಎಷ್ಟು ಚೆನ್ನಾಗಿ ಇರುತ್ತಿತ್ತು, ದೀಪಗಳ ದಾರಿಯಲಿ ಕಥೆಗಳ ಬರೆದಂತ.., ರಾಜ್‍ಕುಮಾರ್ ಹಾಡಿದ ಸಾಲುಗಳಾಧರಿಸಿ ಒಂದು ಕತೆ.. ಇನ್ನೂ ಹಲವು.., ಪ್ರತಿ ಭಾನುವಾರ ಪ್ರಸಾರವಾಗತ್ತಿದ್ದ ೧ ಗಂಟೆಯ ಚಲನಚಿತ್ರ, ಶನಿವಾರ ೪ ಗಂಟೆಗೆ ಬರುತ್ತಿದ್ದ ಸುಬ್ಬಣ್ಣ, ಅವರ ಹಾಸ್ಯ ಬರಿತ ಮಾತಿಗೆ ಕಾತರವಿರುತ್ತಿತ್ತು. ಮುಂಬೈ ವಿವಿಧ ಭಾರತಿ ಇಂದಿಗೂ ಹಾಗೆ ಇದೆ...ಆಜ ಕೆ ಫನಕಾರ, ಹವಾಮೆಹಲ್, ಗುಲದಸ್ತಾ, ಸಖಿ-ಸಹೇಲಿ(ನಿಮ್ನ ಮಿಶ್ರ),ಜಯ್ ಮಾಲಾ, ಯೂನಸ್ಕಾನ ಅವರ ಫಿತಾರ, ಭುಲೆ ಬಿಸ್ರೆ ಗೀತ,.... ಎಲ್ಲ ನೆನಪಾಗುತ್ತಿದೆ. ಈಗ ಮೊಬೈಲ್ ಲಿ ಕೇಳಬಹುದು FM ಗಳನ್ನು, ಆದರೆ ರೇಡಿಯೋದಷ್ಟು ಆತ್ಮೀಯವಾಗಲಾರದು. ಈಗ ನಮ್ಮ ಮನೆಯಲ್ಲೂ ರೇಡಿಯೋ ಮಾಯವಾಗಿದೆ. 
ನಾನು ಮನೆಯಲ್ಲಿದ್ದಷ್ಟು ಹೊತ್ತು ನನಗೆ ಅಂಟಿಕೊಂಡು ಇರುತ್ತಿತ್ತು. ಓದುವಾಗ ಬರೆವಾಗ, SSLC ಪರೀಕ್ಷಾ ಸಮಯದಲ್ಲೂ ಜೊತೆಗಿತ್ತು. ನನಗೆ ಬೇಸರ ಎಂಬ ಶಬ್ದದ ಪರಿಚಯವೇ ಆಗದಂತೆ ನೋಡಿಕೊಂಡಿತ್ತು. ನನ್ನ ಪಾಡಿಗೆ ನಾನು ನನ್ನ ಕೆಲಸ ಮಾಡುತ್ತಿದ್ದರೆ, ಅದರ ಪಾಡಿಗೆ ಅದು ಹಲುಬುತ್ತಿರುತ್ತಿತ್ತು. ಶಾಸ್ತ್ರೀಯ ಸಂಗೀತ ಬಂದಾಗಲೂ ಹಾಗೆ ಇರುತ್ತಿತ್ತು, ಅಮ್ಮ ಅದೇನೆ ಎಂದು ಗದರುತ್ತಿದ್ದಳು, ನಾನು ಸಂಗೀತ ತರಗತಿಗೆ ಸೇರಿದ ಮೇಲೆ ಅದನ್ನೂ ಸುಮ್ಮನೆ ಕೇಳುತ್ತಿಳು.
ನನ್ನ ಸುಖ-ದುಃಖ, ಕೋಪ, ತಾಪ, ಹೊಸ ವರ್ಷದ ಸಂಭ್ರಮಾಚರಣೆ ಎಲ್ಲಕ್ಕೂ ಸಾಥ ನೀಡಿದ್ದೆ, ಬಾಲ್ಯ ಸ್ನೇಹಿತನಂತೆ.... Miss you lot, meet you soon!!!📻📻

ರಾಧೆ...

🎶

Comments

Popular posts from this blog