ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು  ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ್ತಾಯ್ದಿಲ್ಲೆ, ಕಡಿಗೆ ಇದು ತಂಗಿಗೆ ಹೇಳಿ ಬೀಸಿ ಇಟ್ಟಿತ್ತು, ತಗಾ.. ' ಎಂದು ಬೀಸಿದ ಮದರಂಗಿಯ ಕೊಟ್ಟೆ ಕೊಟ್ಟರೆ, ನಾನವನ ಕತ್ತಿಗೆ ಜೋತು ಬೀಳುತ್ತಿದ್ದೆ. ಅಮ್ಮನೆಡೆ ಹೆಮ್ಮೆಯ ನಗು.. ಅದೊಂದು ರೀತಿಯ ಬಿಗುಮಾನ, ಅಭಿಮಾನ ಮಾವನ ಮೇಲೆ. 'ಹೌದೇ ನಿನ್ನ ಮಾವ' ಎಂದು ನಗುವಳು. ಅಷ್ಟೊತ್ತಿನ ಚಡಪಡಿಕೆ ಎಲ್ಲಾ ಮಾಯವಾಗಿ ಮೋಡದಲ್ಲೂ ನಕ್ಷತ್ರ ಚಂದ್ರ ಇಣುಕುತ್ತಿತ್ತು. ಎಷ್ಟು ಖುಷಿ!!! ಬೇಗ ರಾತ್ರಿ ಊಟ ಮುಗಿಸಿ, ಮೆಹಂದಿ ಕಾರ್ಯಕ್ರಮ ಪ್ರಾರಂಭವಾಗುತ್ತಿತ್ತು. ಅಮ್ಮ ಚುಟ್ಟಿ ತಯಾರಿಸಿ ಕೊಡುತ್ತಿದ್ದಳು. ನನ್ನ ಕೈಗಳಿಗೆ ಹಚ್ಚಿ ಮುಗಿಸುವಷ್ಟರಲ್ಲಿ ನನಗೆ ನಿದ್ರಾದೇವಿ ಆವರಿಸುತ್ತಿದ್ದಳು. ಆದರೂ ಬಿಡದೆ ನನ್ನ ಕಾಲುಗಳಿಗು ಮದರಂಗಿ ಕಟ್ಟಿ ಎಷ್ಟೊತ್ತಿಗೆ ಮಲಗುತ್ತಿದ್ದನೋ. ಅಮ್ಮ ಮಧ್ಯೆ ಎದ್ದು ಬಂದು ಇನ್ನೂ ಮಲಗಿಲ್ವಾ ಎಂದು ವಿಚಾರಿಸುತ್ತಿದ್ದರೆ, ಆ ಮಿಣಕು ಬೆಳಕಲ್ಲಿ, ಮಾವ ನನ್ನ ಅಂಗೈ ಮೇಲೆ ನಿಧಾನಕ್ಕೆ ಉಂಡೆ ಉಂಡೆ ಮಾಡಿ ಅದನ್ನು ಕಟ್ಟುತ್ತಿರುತ್ತಿದ್ದ ಆಡುಮುಟ್ಟದ ಸೊಪ್ಪು ಹಾಕಿ. ಎಲ್ಲಾ ಮುಗಿವ ವೇಳೆಗೆ ನನ್ನ ನಿದ್ದೆ ಹಾರಿಹೋಗಿರುತ್ತಿತ್ತು. ಬೆಳಗಾಗುವ ತನಕ, ನಿದ್ರಿಸಲು ಒದ್ದಾಡಿ ನಾನೆಲ್ಲೊ ಆ ಚುಟ್ಟಿ ಎಲ್ಲೋ ಆಗಿರುತ್ತಿತ್ತು. ಎಚ್ಚರವಾದಾಗಲೆಲ್ಲ ಹಾಸಿಗೆ ತಡಕಾಡಿ ಅಲ್ಲಿ ಸಿಕ್ಕ ಜಾರಿಬಿದ್ದ ಟೊಪ್ಪಿಗಳನ್ನ ಕೈ ಬೆರಳಿಗೆ ಸಿಕ್ಕಿಸಿಕೊಂಡು ಬೆಳಗು ಎಂದು ಹರಿವುದೊ, ಎಷ್ಟು ಬೇಗ ಕೈರಂಗನ್ನು ನೋಡುವೆನೋ ಎಂದು ಕಾಯುತ್ತಿದ್ದೆ. ಅಂದು ಮಾತ್ರ ಅಮ್ಮನೊಡನೆ ಎದ್ದು, ಚಿಮಣಿ ದೀಪದಲ್ಲೇ ಕೈ ಬಣ್ಣ ನೋಡಿ, ಮಾವನಿಗೆ ತೋರಿಸಿ, ಸಮಧಾನವಾಗಿ ಮತ್ತೆ ಮಲಗುತ್ತಿದ್ದೆ... ನಾನು ಹೈಸ್ಕೂಲ್ ನಲ್ಲಿ ಓದುವಾಗಲು ಮಾವ ಕಾಲಿಗೆ ಹಚ್ಚುವೆ ಎಂದು ನಾ ಬೇಡ ಎಂದು ಗಲಾಟೆ...  ಅಜ್ಜಿ ಹೇಳುತ್ತಿದ್ದರು ಕಾಲಿಗೆ ಹಚ್ಚಿದರೆ ಚೇಳು ಕಚ್ಚಲ್ಲಾ ಎಂದು... ಏನೆ ಆದರು ಹರಿವ ನೀರಲ್ಲಿ ರಂಗೇರಿದ ಕಾಲು ಕೈ ಇಳಿಬಿಟ್ಟು ನೋಡುವ ಮಜವೇ ಬೇರೆ ಇತ್ತು.... ಮತ್ತೆ ಮನಸಾಗಿದೆ...ಗುಬ್ಬಿ ಗುಬ್ಬಿ ಮುದ್ದೆ ಮದರಂಗಿ ಕಟ್ಟಿಕೊಳ್ಳಲು... 😍😍 
ನಾಗರ ಪಂಚಮಿ ಹಬ್ಬದ ಶುಭಾಶಯಗಳು.


ರಾಧೆ...🎶

Comments

Post a Comment

Popular posts from this blog