ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
ಕಸದ ಬುಟ್ಟಿ ಸೇರುವ ಮುನ್ನ......
ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನನ್ನ ರಾಜಕುಮಾರ ಮತ್ತು ಅವನ ಪರಿವಾರ. ಕಣ್ಣಾಲೆಗಳು ತುಂಬಿ ಬಂದವು ಆನಂದದಿಂದ. ಬೇರಾವ ಯೋಚನೆಯೂ ಬೇಕಿರಲಿಲ್ಲ, ಅದೇ ಗುಂಗಲ್ಲಿ ಕುಳಿತಿದ್ದೆ, ಏನೋ ಒಂದು ತೆರನಾದ ಮುದ ಕೊಡುತ್ತಿತ್ತು....ಹಾಗೆ ತೇಲುವ ಬಯಕೆಯಾಯಿತು, ಮನದಲ್ಲೆ ಗುನುಗಿದೆ ಈ ಕ್ಷಣ ಎಂದೂ ಮುಗಿಯದಿರಲಿ....
ನಾನು ನಿರೀಕ್ಷಿಸಿದ ದಿನ ಬಂದಾಯಿತು. ಯಾವಾಗಲೂ ಮೆಸೇಜ್ ಮಾಡುವವ ಇಂದು ಕಾಲ್ ಮಾಡಿದ್ದ. ನನ್ನ ಹೃದಯ ಜೋರಗಿ ಬಡಿದುಕೊಳ್ಳ ತೊಡಗಿತು. ನನ್ನ ವಿದ್ಯಾಭ್ಯಾಸದ ಕುರಿತು ವಿಚಾರಿಸಿದ, ಭವಿಷ್ಯದ ಯೋಜನೆಗಳ ಕುರಿತು ಕೇಳಿದ. ಆಗಲೇ ನನ್ನೊಳಗೆ ಯುದ್ಧ ಪ್ರಾರಂಭವಾದಂತಿತ್ತು. ಏಕೊ ಗೊತ್ತಿಲ್ಲ, ನನ್ನ ಕನಸುಗಳ ಕುರಿತು ನನ್ನ ಅಣ್ಣನಲ್ಲದೆ ಇನ್ನಾರಿಗು ಕೇಳುವ ಹಕ್ಕಿಲ್ಲ ಎಂದು ನಾನು ಅಂದುಕೊಂಡಾಗಿತ್ತು. ಅದಕ್ಕೆ ಧಕ್ಕೆಯಾದರೆ ಮನದ ಮೂಲೆಯಲ್ಲಿ ಕದನ ಪ್ರಾರಂಭವಾಗುವುದು. ಪಾಪ ಅವನಿಗೇನು ಗೊತ್ತು ನನ್ನ ಹುಚ್ಚು ಮನಸಿನ ತೊಳಲಾಟಗಳು.... ಅವನ ಮಾತು ಮುಂದುವರಿದಿತ್ತು. ಸ್ವಲ್ಪ ನಿಶ್ಯಬ್ದದ ನಂತರ ಅವನು ಪೀಠಿಕೆ ಹಾಕಿದ್ದ., "ನೀನಂದ್ರೆ ಯಾಕೊ ಇಷ್ಟ. ನನಗೆ ಗೊತ್ತು ನೀನು ಪೊಸಿಟಿವ್ ಆಗಿ ರಿಪ್ಲೈ ಮಾಡ್ತಿಯಾ ಎಂದು" ಎನ್ನುತ್ತ ದೀರ್ಘವಾದ ಭರವಸೆಯ ಉಸಿರು ಬಿಟ್ಟ. ನನ್ನ ಉಸಿರು ನಿಂತೇ ಹೋದಂತಿತ್ತು. ಯಾಕೋ ಆ ಕ್ಷಣಕ್ಕೆ, ನನ್ನ ರೆಕ್ಕೆ-ಪುಕ್ಕಗಳನ್ನೆಲ್ಲ ಕಿತ್ತು ಪಂಜರದಲ್ಲಿ ಬಂದಿಯಾದಂತೆ ಭಾಸವಾಯಿತು. ಇದುವರೆಗೆ ನಾನು ನನ್ನ ಹೆತ್ತವರಿಂದ ಹೇರಳವಾಗಿ ಪಡೆದಿದ್ದು ಸ್ವಾತಂತ್ರವೊಂದೆ, ಹಾಗೆಂದು ಅದು ಸ್ವೇಚ್ಛಾಚಾರಕ್ಕೆ ಎಂದೂ ತಿರುಗಿಲ್ಲ. ನನಗೆ ಬುದ್ದಿ ಬಂದಾಗಿನಿಂದ ನನ್ನ ಪ್ರತಿಯೊಂದು ಹೆಜ್ಜೆ ನನ್ನದಾಗಿ ಇಟ್ಟಿದ್ದೆ. ನನ್ನ ಕನಸುಗಳನ್ನು ಹಂಚಿಕೊಳ್ಳುತ್ತಿರಲಿಲ್ಲ, ನನ್ನ ನಿರ್ಧಾರಗಳಲ್ಲಿ ಇನ್ಯಾರ ಸಲಹೆ ಕೇಳಬಯಸುತ್ತಿರಲಿಲ್ಲ, ಬೇರೆಯವರ ಹಸ್ತಕ್ಷೇಪ ಹಿಡಿಸುತ್ತಿರಲಿಲ್ಲ, ತಪ್ಪಿರಲಿ, ಸರಿಯಿರಲಿ, ಅದರ ಪೂರ್ಣ ಜವಬ್ದಾರಿ ನನ್ನದೇ ಇರುತ್ತಿತ್ತು. ಅದು ನನಗೆ ರೂಢಿಯಾಗಿತ್ತು, ಇಷ್ಟಪಡುತ್ತಿದ್ದೆ ಕೂಡ. ಬಹುಶಃ ಇಷ್ಟು ವರ್ಷ ಪ್ರೀತಿಯೆಂಬ ಮಾಯೆ, ನನ್ನ ದೂರವಿಟ್ಟಿದ್ದು ಇದೇ ಮನೋವೃತ್ತಿಯಿಂದ. ಹಾಗೆಂದು ಪ್ರೀತಿಯ ಕುರಿತಾಗಿ ಕುತೂಹಲವಿರಲಿಲ್ಲವೆಂದೇನಲ್ಲ, ಅದರಲ್ಲಿ ಮಿಂದೇಳುವ ಬಯಕೆಯಿತ್ತು. ಆದರೆ ಅದಕ್ಕೆಲ್ಲಾ ನನ್ನದೇ ಆದ ಕಾಯಿದೆ ಕಾನೂನುಗಳು ಇದ್ದವು. ಮೊದಲು ನಾನು ನನ್ನ ಕಾಲಮೇಲೆ ನಿಲ್ಲಬೇಕು, ಆತನೂ ಕೂಡ. ಅಪ್ಪ ಹಾಕುವ ಕರೆನ್ಸಿಯಲ್ಲಿ ಹುಡುಗನ ಜೊತೆ ಮಾತನಾಡುವ ಹಂಬಲವಿರಲಿಲ್ಲ. ನಾನು ನೋಡಿದ್ದೆ, ನನ್ನ ಗೆಳತಿಯರೆಲ್ಲ ಗಂಟಾನುಗಟ್ಟಲೆ ಮೊಬೈಲ್ಗೆ ತಲೆ ಕೊಟ್ಟು, ಹಾಂ. ಹೂಂ ಎನ್ನುವುದು, ಜಗಳಮಾಡುವುದು, ಅಳುವುದು, ನಗುವುದು....ಪಕ್ಕಾ ಮೆಂಟಲ್ಗಳ ತರ. "ಹಲೋ ಆರ್ ಯು ದೆರ್" ಎಂದಾಗ," ಹುಂ" ಎಂದೆ. "ಏನು ಮೌನಂ ಸಮ್ಮತಿ ಲಕ್ಷಣಂ, ಎಂದ್ಕೊಳೊದಾ" ಎಂದ. ಅವನ ಪ್ರೀತಿ ತುಂಬಿದ ಧ್ವನಿಯಲ್ಲಿ ಅವನ ಮೊಗವನ್ನೊಮ್ಮೆ ಕಲ್ಪಿಸಿಕೊಂಡೆ. ಕಂಗಳಲ್ಲಿ ಪ್ರೀತಿಯ ಹಣತೆ ಪ್ರಜ್ವಲಿಸುತ್ತು. ಮೊದಲ ಪ್ರೀತಿಯೇ ಹಾಗೆ. ಅದರಲ್ಲೂ ಹುಡುಗರು ತುಂಬಾನೆ ಜೋಶ್ ಲ್ಲಿ ಇರುತ್ತಾರೆ. ಆಗಲೇ ಅವನ ಕನಸುಗಳನ್ನು ಹೊಸಕಲು ಮನಸು ಬರಲಿಲ್ಲ. "ಸ್ವಲ್ಪ ಸಮಯ ಬೇಕು" ಎಂದೆ. ಮನಸಲ್ಲೆ ನಗು ಬಂತು, ಏನೆ ಆದರು ಉತ್ತರ ಒಂದು ಹ್ಞಾಂ, ಇಲ್ಲವೆ ನಾ ಎಂದಿರುವಾಗ ಯೋಚಿಸುವುದೇನು ಬಂತು, ಎರಡರಲ್ಲಿ ಒಂದು ಹೇಳಿದರಾಯಿತಲ್ಲ. ಅದರಲ್ಲೇನು ಯೋಚಿಸುವುದು ಎನ್ನಿಸಿತು. ಆತ ಗಂಭೀರನಾಗಿದ್ದ, ನಿರ್ಧಾರದ ಬಗ್ಗೆ ಸ್ಥಿರವಾಗಿದ್ದ. ನನ್ನಲ್ಲಿ ಎರಡೂ ಇರಲಿಲ್ಲ. ಆದರು ದುಡುಕ ಬಾರದು ಎಂದು ಸುಮ್ಮನಾದೆ. "ಸರಿ ನಾಳೆ ಹೇಳುವೆಯಾ" , ಎಂದ. "ಉಹ್ಞುಂ .... ಇನ್ನು ಸ್ವಲ್ಪ ಟೈಮ್ ಬೇಕು" ಎಂದು ಫೋನಿಟ್ಟೆ.
ಧನಾತ್ಮಕವಾಗಿರುವುದೆಂದು ಭಾವಿಸಿರುವೆ ಎಂದು ಪದೆ ಪದೆ ಹೇಳಿದ. ಒಂದೆಡೆ ಖುಷಿ, ಇನ್ನೊಂದೆಡೆ ಭಯ, ಮತ್ತೊಂದೆಡೆ ಅವನಿಟ್ಟ ನಂಬಿಕೆ. ಒಮ್ಮೆ ಎನಿಸಿತು ಅದು ಹೇಗೆ ಅಷ್ಟು ಭಲವಾಗಿ ನಂಬಿರುವ ನಾನು ಹ್ಞೂಂಗುಟ್ಟುವೆ ಎಂದು. ನನಗೂ ಬೇರೆ ಕನಸಿರ ಬಹುದಲ್ಲವೇ, ಬಲವಂತ ಪಡಿಸುವುದು ಎಷ್ಟು ಸರಿ. ಆದರೆ ಇಲ್ಲಿ ನನ್ನ ಅಭಿಪ್ರಾಯ ಕೇಳಿರುವನಲ್ಲ, ಎಂದು ಸಮಾಧಾನ ಪಟ್ಟುಕೊಂಡೆ. ಒಂದು ವೇಳೆ ಅಂದು ಅವನು ಪ್ರೀತಿ ವ್ಯಕ್ತಪಡಿಸಿರದಿದ್ದರೆ ಮುಂದೊಮ್ಮೆ ನಾನೇ ಅವನ ಮುಂದಿಡುತ್ತಿದ್ದೆನೇನೊ. ಆದರೆ ಇಷ್ಟು ಬೇಗನೆ ಸಂಬಂಧಗಳ ಜಾಡೊಳಗೆ ಇಳಿಯಲು ಭಯವಾಯಿತು. ಅವನನ್ನು ಪ್ರೀತಿಸುತ್ತಿರುವೆ ಎಂಬ ಭಾವವೇ ಈಗಿನ ಪರಿಸ್ಥಿತಿಗಿಂತ ಚೆನ್ನಾಗಿತ್ತು. ಹಾಗೆಯೇ ಇರ ಬಯಸಿದ್ದೆ. ಆಗ ಅವನುಕೊಟ್ಟ ಕೆಲ ಸಲಹೆಗಳು ನೆನಪಾದವು, ಯಾಕೆ ನೀನು ಹಾಗಿರುವೆ, ಹಾಗೆ ನಡೆದುಕೊಳ್ಳ ಬೇಡ, ಎಂಬ ಸಹಜ ಸಲಹೆಗಳು ಯಾಕೊ ಕಿರಿ ಕಿರಿ ಅನಿಸಿತು. ಅವನು ನನಗಿಂತ ನನ್ನ ವಿದ್ಯೆ, ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿರಬಹುದೆ ಉಳಿದವರಂತೆ, ಎಂಬ ಸಂಶಯದ ಹುಳು ಹೊಕ್ಕಿತು. ಥೂ ಈ ಪ್ರೀತಿ- ಗೀತಿ ಎಲ್ಲಾ ನನಗೆ ಹೊಗಿಬರಲ್ಲ, ಅವನೋ ಸೈಲೆಂಟ ಬಾಯ್, ನಾನೊ ಸಕತ್ ಮೂಡಿ, ಬೇಡ ಹುಡುಗ ಚೆನ್ನಾಗಿರಲಿ ಎನ್ನಿಸಿತು. ಆದರೆ ಅವನಿಂದ ದೂರವಾಗುವುದನ್ನ ನೆನೆಸಿಕೊಳ್ಳಲು ಕಷ್ಟವಾಯಿತು. ನಂದೊಳ್ಳೆ ಕತೆ ಎನಿಸಿತು, ಅತ್ತ ಕೋಲು ಮುರಿಯಬಾರದು, ಇತ್ತ ಹಾವೂ ಸಾಯಬೇಕು. ಹೇಗೆ ಆತನಿಗೆ ನನ್ನ ಯಾತನೆ ಮನವರಿಕೆ ಮಾಡಿಕೊಡಲಿ ಕೊನೆಗೂ ತಿಳಿಯಲಿಲ್ಲ..... ದಿನಬೆಳಗಾದರೆ ಆತನ ಮೆಸೇಜ್ ಗಳು ಹೃದಯವನ್ನ ಹಿಂಡುತ್ತಿತ್ತು. ಆತನ ಅರ್ಧದಷ್ಟೂ ನನ್ನಲ್ಲಿ ಹುರುಪಿರಲಿಲ್ಲ. ಯಾಕೊ ನಾ ಅವನಿಗೆ ತಕ್ಕವಳಲ್ಲಾ, ಆತನನ್ನು ಸದಾ ಖುಷಿಯಿಂದಿಡುವ ಒಳ್ಳೆ ಹುಡುಗಿಯನ್ನ ಇಷ್ಟ ಪಡುವಂತೆ ಮಾಡು ಎಂದು ದೇವರಲ್ಲಿ ಮೊರೆ ಇಟ್ಟೆ. ಕ್ಷಮಿಸಿಬಿಡು, ನನ್ನ ಉತ್ತರ ನಕಾರಾತ್ಮಕವಗಿರುವುದಕ್ಕೆ ಎಂದು ಮೆಸೇಜ್ ಹಾಕಿ ಸುಮ್ಮನಾದೆ. ಏನೊ ಕಳೆದುಕೊಂಡ ಭಾವ, ಏನೆಂದು ಕೊಳ್ಳುವನೋ ಎಂಬ ದುಗುಢ.... ಆ ಕಡೆಯಿಂದ ಕರೆ ಬಂತು, "ಯಾಕೆ, ಏನಾಯಿತು" ಎಂದ. ಅವನ ಆ ಆಧೃ ಧ್ವನಿ ನನ್ನನ್ನು ಮೂಖವಿಸ್ಮಿತಳನ್ನಾಗಿ ಮಾಡಿತ್ತು. ಮೌನಿಯಗಿದ್ದೆ!! ಕಾರಣ ಏನೆಂದು ಕೊಡಲಿ, ತಿಳಿಯಲೇ ಇಲ್ಲ. ಆದರೂ ಎಂದೆ, "ನನಗೆ ಕೋಪ ಜಾಸ್ತಿ, ತುಂಬಾ ಜಿದ್ದಿ, ನಿನಗೇ ತೊಂದರೆ, ನೋಡು.... ಮೂಡಿಯಾಗಿರುತ್ತೇನೆ", ಆದರೆ ಅವನು- " ಪರವಾಗಿಲ್ಲಾ, ನಂಗೆ ಅಂತವರೇ ಇಷ್ಟ. ಪ್ರೊಮಿಸ್, ನಿನ್ನ ಸ್ಟಡಿಗೂ ಯಾರು ಅಡ್ಡಿ ಬರಲ್ಲಾ, ನೋಡು ಮತ್ತೊಮ್ಮೆ ಯೋಚಿಸು" ಎಂದ. ಚಿಕ್ಕ ಮಗುವಿನ ರೀತಿ ಗೋಗರೆದ. ಅವನು ದೊಡ್ಡವನಾಗಿಯು ನನ್ನ ಮುಂದೆ ಅಂಗಲಾಚಿದ್ದು, ಯಾಕೊ ಸರಿ ಬರಲಿಲ್ಲ. ಪಾಪವೆನಿಸಿತು. ನಾನಾಗಿದ್ದರೆ, ಹೋದ್ರೆ ಹೋಗು ಎನ್ನುವ ಗಿರಾಕಿ, ಆದರೆ ಅವನು..... ಹಾಗೆಂದು ಬೇಡವೆನಲು ಅವನಲ್ಲಿ ನನಗೆ ಯಾವ ಕಾರಣವಿರಲಿಲ್ಲ, ಅದೂ ಇಂದಿನ ಕಾಲದಲ್ಲಿ. ಪ್ರೀತಿಯೆಂಬ ಪದವನ್ನು ನಾನು ಇದುವರೆಗೆ ಎಂದೂ ಗಂಭೀರವಾಗಿ ಪರಿಗಣಿಸಿದ್ದು ಇಲ್ಲವೇ ಇಲ್ಲ, ಈಗ ತಕ್ಷಣಕ್ಕೆ ಹೇಗೆ??
ಯಾವುದೋ ಹಳೆ ಚಲನಚಿತ್ರದ ಸಾಲು ನೆನಪಾಯಿತು...ನೀನು ಪ್ರೀತಿಸುವವರಿಗಿಂತ , ನಿನ್ನನ್ನು ಪ್ರೀತಿಸುವವರ ಜೊತೆಯಾಗು, ಸುಖದಿಂದಿರುವೆ... ಎಂದು. ಸದ್ಯ ನಾನಂತು ಯಾರ ಪ್ರೀತಿಯಲ್ಲೂ ಇರಲಿಲ್ಲ. ಆ ಸಮಯದಲ್ಲಿ ಅವನು ಜೀವನದ ಪ್ರಮುಖ ಹಂತಕ್ಕೆ ಪಾದಾರ್ಪಣೆ ಮಾಡುವವನಿದ್ದ. ಇಷ್ಟು ದಿನ ಜೊತೆಗಿದ್ದು, ನಾ ಜೊತೆಗೂಡಿ ಕಂಡ ಕನಸಿಗೆ ಅವನ ಜೊತೆ ನೀಡದೆ ಹೋದರೆ ನಾನು ಪಾಪಿಯಾಗುವೆ ಎನಿಸಿತು. ನನ್ನ ನಕಾರಾತ್ಮಕ ಉತ್ತರದ ಛಾಯೆ ಅವನ ಜೀವನಯಾತ್ರೆಯ ಮೇಲಾಗದಿರಲಿ, ಎಂಬ ಉದ್ದೇಶದೊಂದಿಗೆ ಮಾರನೆಯ ದಿನ " ಹ್ಞುಂ" ಎಂದೆ. ಅವನ ಖುಷಿ ಎಲ್ಲೆ ಮೀರಿತ್ತು. ಅಂದು ಸಂಜೆ ಕಾಲ್ ಮಾಡಿದವ "ನಾನು ಹರಕೆ ಹೊತ್ತಿದ್ದೆ, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಬಂದೆ. ಎಷ್ಟು ಖುಷಿಯಾಗ್ತಿದೆ ಗೊತ್ತಾ, ಅಮ್ಮಂಗೆ ಹೇಳ್ಲಾ"ಎಂದ, ಅದಕ್ಕೆ ನಾನು, "ಈಗ ಬೇಡ, ಸಮಯ ನೋಡಿ ತಿಳಿಸುವೆ" ಎಂದೆ. ನಾನು ರಾಕ್ಷಸಿಯಿರಬೇಕು ಎನಿಸಿತು. ಅವನಲ್ಲಿ ಪ್ರೀತಿಯ ನಾಟಕ ಆಡುತ್ತಿರುವಂತೆ ಭಾಸವಾಯಿತು. ಮೊದಲಿನ ಮಾಧುರ್‍ಯತೆ ಅವನಿಂದ ದೂರವಾಗಿತ್ತು, ಮಾತುಗಳಲ್ಲಿ ಕಾಠಿಣ್ಯತೆಯ ಅರಿವು ನನಗಾಗ ತೊಡಗಿತು. ಅವನು ಖುಷಿಯ ಅಮಲಲ್ಲಿ ಗುರುತಿಸದಾಗಿದ್ದ ಬಹುಶಃ. ಮೊದಲಿನಂತಾಗಲು ತುಂಬ ಹೆಣಗಾಡಿದೆ. ದೇವರಲ್ಲಿ ಹೊಸ ಮನವಿ ಸಲ್ಲಿಸಿದೆ,ಅವನಿಗೆ ಬೇರೆ ಯಾರಾದರು ಹುಡುಗಿ ಇಷ್ಟವಾಗುವಂತೆ ಮಾಡು, ಎಂದು. ಪಾಪ ದೇವರು ಕನ್ಫ್ಯೂಸ್ ಆಗಿದ್ದ. ನನ್ನ ಈಗಿನ ಮೊರೆ ಪಾಲಿಸಲೊ, ಹಳೆಯ ಮೊರೆ ನಿತ್ಯ ಮಲಗುವಾಗ ಮಾಡುತ್ತಿದ್ದುದಾ ಎಂದು......
ನನ್ನ ನಡುವಳಿಕೆ ನನಗೆ ಬೇಸರ ಮೂಡಿಸಿತ್ತು. ಕೃತಕತೆ ಎಲ್ಲೆಡೆ ತಾಂಡವವಾಡುತ್ತಿರುವ ರೀತಿ ಭಾಸವಾಯಿತು. ಬೇಕಿರುವುದನ್ನು ಬೇಕು ಎನ್ನಲಾರದೆ, ಬೇಡವಾಗಿದ್ದನ್ನು ತಿರಸ್ಕರಿಸಲು ಆಗದೆ ನನ್ನೊಡನೆಯೇ ಯುದ್ಧಕ್ಕೆ ಇಳಿದಿದ್ದೆ. ಆದರೂ ಅವನ ಸಹವಾಸದಿಂದ ಸರಿ ಹೋಗಬಹುದು ಎಂದುಕೊಂಡೆ. ಈ ನಡುವೆ ನಡೆದ ಕೆಲ ಘಟನೆಗಳು ನನ್ನ ನಿರ್ಧಾರಕ್ಕೆ ಪುಷ್ಟಿ ನೀಡತೊಡಗಿದವು. ಮನಸ್ಸು ಇನ್ನೂ ಕಠೋರವಾಗಿತ್ತು. ಇಲ್ಲಿ ನನ್ನ ತಪ್ಪೂ ಇರಲಿಲ್ಲ, ಅವನ ತಪ್ಪೂ ಇರಲಿಲ್ಲ. ಅವನ ಹಾದಿಗೆ ನಾನು ಮುಳ್ಳೇ ಆಗುವೆ ಎಂಬುದನ್ನ ಪರಿಸ್ಥತಿ ಪದೆ ಪದೆ ಮನವರಿಕೆ ಮಾಡಿಕೊಟ್ಟಿತು. ನನ್ನ ದಾರಿಯ ಕಲ್ಲುಗಳು ನನಗೇ ಮೀಸಲಿರಲಿ ಎನಿಸಿತು....ಅವನು ಕೇಳುವ ಯಾವ ಪ್ರಶ್ನೆಗೂ ನನ್ನಲ್ಲಿ ಉತ್ತರವಿರಲಿಲ್ಲ. ಅವನಿಗೆ, ಅವನ ಪ್ರೀತಿಗೆ ನಾನು ಯೋಗ್ಯಳಲ್ಲ ಎನಿಸಿತು. ಅವನಿಗೆ ಜೊತೆ ಕೊಡುವುದು ನನ್ನ ಸ್ವಾರ್ಥ ಸಾಧನೆ ಎನಿಸಿತು. ಕೆಲ ಸತ್ಯಗಳು ಬಿಸಿತುಪ್ಪದಂತೆ, ಉಗುಳಲೂ ಆಗದು, ನುಂಗಲೂ ಆಗದು.... ಯಾವುದೇ ಇಂಥ ನಿರ್ಧಾರ ತೆಗೆದುಕೊಳ್ಳುವಾಗ ನಾವು ಆರ್ಥಿಕವಾಗಿ ಸ್ವತಂತ್ರರಿರಬೇಕೆಂದು ಮನದಟ್ಟಾಯಿತು. ಕಂಡ ಕನಸುಗಳನ್ನು ಕೈಯಾರೆ ಕೊಳ್ಳಿ ಇಡಹೊರಟ್ಟಿದ್ದೆ, ಅದು ನನಗೇನು ಹೊಸತಾಗಿರಲಿಲ್ಲ. ಆದರೆ ಅವನನ್ನೂ ಬಲಿಪಶು ಮಾಡಿದೆನಲ್ಲಾ ಎಂಬ ಅಪರಾಧಿ ಭಾವ ಸದಾ ಕಾಡುವುದು. ಬಳಿಕ ಅವನ ಜೀವನದ ಯಾವುದೇ ನಿರ್ಧಾರಕ್ಕೂ ನಾ ಜೊತೆಗೊಡಲಿಲ್ಲ. ಆದಷ್ಟು ದೂರ ಇರಬಯಸಿದೆ, ಯಾಕೆಂದರೆ ಬಳಿಕ ಅವನ ಮಾತುಗಳು ಕಾಡದಿರಲೆಂದು. ಅವನಾದರೋ ನನ್ನನ್ನು ದ್ವೇಷಿಸಲಾದರೂ ಹಕ್ಕು ಪಡೆಯುವ.... ಇಲ್ಲಿ ನಾನು?? ಯಾರ ಬಳಿಯೂ ಹೇಳಲಾರದೆ, ದಿನವು ಅವನ ನೆನಪಲ್ಲೆ ಸತ್ತು ಬದುಕಬೇಕು. ಪ್ರತಿ ಕ್ಷಣ ಬಾಣಲೆಯ ಮೇಲಿರುವಂತೆ ಎನ್ನಿಸತೊಡಗಿತು. ಕೇವಲ ಆ ದಿನಕ್ಕಾಗಿ ಕಾದೆ, ಅವನ ಹೊಸ ಜೀವನದ ಆರಂಭಕ್ಕೆ. ಬೇಗನೆ ಬಂದುಬಿಟ್ಟಿತು.... ದಿನ ಕಳೆದಂತೆ ತನ್ನ ಕೆಲಸದಲ್ಲಿ ಮಗ್ನನಾಗ ತೊಡಗಿದ. ನನ್ನ ಕರ್ತವ್ಯ ಮುಗಿದಿತ್ತು. ಅವನು ತನ್ನ ಹೊಸ ಕಾರ್ಯಗಳ ಕುರಿತು ಹೇಳುತ್ತಿದ್ದರೆ ಎಷ್ಟು ಸಂತೋಷವಾಗುತ್ತಿತ್ತು. ಹಾಗೆ ಪ್ರತಿ ಬಾರಿ ಮಾತನಾಡುವಾಗ ಇದೇ ಕೊನೆಯ ಮಾತಾಗಬಹುದೆ ಎಂಬ ಆತಂಕ ಕಾಡುತಿತ್ತು. ಆದರೆ ಆತನನ್ನು ನನ್ನಿಂದ ಹೊರದಬ್ಬಲು ಸಕಲ ತಯಾರಿ ನಡೆಸಿದ್ದೆ. ಯೋಚನೆಯಲ್ಲೆ ನಿದ್ದೆಯಿಲ್ಲದೆ ಕಳೆದ ದಿನಗಳಷ್ಟೊ. ಎಷ್ಟೊ ಬಾರಿ ಅಂದುಕೊಂಡೆ ಬೇಡವೆಂದಿದ್ದಕ್ಕೆ ಗಟ್ಟಿ ಕೂತಿದ್ದರೆ ಈ ದಿನಗಳಗೆ ಅವಕಾಶವಿರುತ್ತಿರಲಿಲ್ಲ ಎಂದು. ಒಮ್ಮೆ, ಮಗದೊಮ್ಮೆ ಯೋಚಿಸಿದೆ, ಪ್ರೀತಿಯಲ್ಲಿ ಸ್ವಾರ್ಥಿ ಆಗಬಹುದೆ?? ಪ್ರಶ್ನೆಯಾಗೆ ಉಳಿಯಿತು.... ಸ್ವಾರ್ಥಿ ಆಗದಿರೆಂದು ಒಳಮನಸ್ಸು ಬಾರಿ ಬಾರಿಗು ಎಚ್ಚರಿಸುತ್ತಿತ್ತು. ಎಲ್ಲಾ ಹೊಯ್ದಾಟಕ್ಕು ಪೂರ್ಣವಿರಾಮವಿಟ್ಟಿದ್ದೆ, ಹೃದಯ ಕಲ್ಲುಮಾಡಿಕೊಂಡು. "ನನಗೆ ನನ್ನದೆ ಆದ ಕನಸುಗಳಿವೆ, ನನಗೆ ಓದನ್ನು ಜೊತೆ ಜೊತೆಗೆ ಸಾಗಿಸುವುದು ಕಷ್ಟಕರವಾಗಿದೆ. ಅದಕ್ಕಾಗಿ ಸದ್ಯಕ್ಕೆ ನಿನ್ನ ಜೊತೆ ಯಾವುದೆ ರೀತಿಯ ಸಂಪರ್ಕದಲ್ಲಿ ಇರ ಬಯಸುವುದಿಲ್ಲ. ಎಲ್ಲ ಸರಿಯಾಗಿದ್ದರೆ ಮೂರು ವರ್ಷಗಳ ನಂತರ ಸಿಗೋಣ.... ನಿನಗೆ ಎಲ್ಲ ರಂಗಗಳಲ್ಲೂ ಯಶಸ್ಸು ದೊರಕಲಿ." ಎಂದು ಮೆಸೇಜ್ ಹಾಕಿ ಮನಸ್ಸು ಹಗುರಾಗುವಷ್ಟು ಅತ್ತೆ. ಅದರ ಭಾರ ಎಷ್ಟಿದೆಯೊ ಇನ್ನೂ ತಿಳಿದಿಲ್ಲ. ಅವನ ಕರೆಗಳನ್ನು ತಿರಸ್ಕರಿಸುವಾಗ ಕಣ್ಣೀರು ಜಿನುಗುತ್ತಿತ್ತು. ಕೊನೆಗೆ ಅವನು ಬೇಸತ್ತು ಮೆಸೇಜ್ ಹಾಕಿದ್ದು, ನಾನಂದು ಕೊಂಡಂತೆ ಇತ್ತು. ನಾನದಕ್ಕೆ ತುಪ್ಪ ಸುರಿದೆ. ಅವನ ದೃಷ್ಟಿಯಲ್ಲಿ ನಾ ಕೇವಲ ಭಾವನೆಗಳ ಜೊತೆ ಆಟವಾಡಿದ ಮೋಸಗಾರ್ತಿ. ದೇವರಿಗೆ ಕೇಳಿಕೊಂಡೆ, ಅವನಿಗೆ ನನ್ನನ್ನು ಆದಷ್ಟು ಬೇಗ ಮರೆವ ಶಕ್ತಿ ಕೊಡು, ಹಾಗು ಅವನಿಗೆ ಒಳ್ಳಯ ಜೀವನ ಸಂಗಾತಿಯನ್ನು ದೊರಕಿಸಿಕೊಡು ಎಂದು. ಈಗ ನಾನು ಅವನ ಮರೆವ ನೆಪದಲ್ಲಿ ನನ್ನೇ ಮರೆತಿರುವೆ. ಜೀವನದ ಗುರಿ ಅವನಾಗಿದ್ದ, ಈಗ ಅವನೆ ನನ್ನ ಪಾಲಿಗಿಲ್ಲ. ಅವನ ನೆನಪಿನ ಎಲ್ಲಾ ಗುರುತುಗಳನ್ನು ಮೊಬೈಲಿನಿಂದ ಅಳಿಸಿರುವೆ.....ಮನಸ್ಸಿನಿಂದ ಅಳಿಸಿಹಾಕುವ ತಂತ್ರಾಂಶ ಸಿಗಲೇ ಇಲ್ಲ. ನನ್ನ ಈ ಬುದ್ದಿಗೇಡುತನಕ್ಕೆ ನಗಲೊ ಅಳಲೊ ತಿಳಯದಾಗಿದೆ.
ಕೊನೆಯದಾಗಿ, ನೀನು ಎಷ್ಟು ಬಾರಿ ಕೇಳಿದ್ದರು ಉತ್ತರಿಸಿರಲಿಲ್ಲ" ಆಯ್ ಲವ್ ಯು ಟೂ ಡಿಯರ್.... ಎವೆರಿ ಡೆ, ಎವೆರಿ ಮೊಮೆಂಟ ಆಯ್ ಮಿಸ್ ಯು" ನಿನ್ನ ಬಳಿ ಹೇಳುವ ಧೈರ್ಯ ನನಗಿಲ್ಲ..... ನೀನೆಂದು ನನ್ನ ಕ್ಷಮಿಸಲಾರೆಯೆಂದು ನನಗೆ ಗೊತ್ತು..... ಐ ವಿಶ ಬಿ ಹ್ಯಾಪಿ ಫೊರೆವರ್......
ರಾಧೆ.....🎶
- Get link
- X
- Other Apps
Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...
Comments
Post a Comment