ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಹರುಕು ಮುರುಕು ರಾತ್ರಿಗಳು

ರಾತ್ರಿ ಹನ್ನೊಂದು ಆಗಿತ್ತು. ಮಲಗಲು ಆಗದೇ, ಕೂರಲು ಆಗದೆ ತಳಮಳಿಸುತ್ತಿದ್ದೆ. ಹಳೆಯ ನೆನಪುಗಳು ಕೆಣಕುತ್ತಿದ್ದವೇ, ಹೊಸ ಅಲೆಗೆ ಹೊಂದಲಾಗದೆ ಚಡಪಡಿಸುತ್ತಿದ್ದೆನೆ, ಗೊತ್ತಿಲ್ಲಾ. ಆದರೆ ಎಲ್ಲದಕ್ಕೂ ಒಂದು ಅಂತಿಮ ವಿರಾಮ ಇಡ ಬಯಸಿದ್ದೆ. ಡೈರಿ ಓದಿದರೆ ಕೊಲ್ಲುವ ನೆನಪಿಗೆ ಸ್ವಲ್ಪ ಸಾಂತ್ವನ ಸಿಗಬಹುದೇ ಎಂದು ಕೊಂಡೆ. ಆದರೆ ಆ ಪುಟಗಳನ್ನು ಮುಟ್ಟಲು ಮನಸ್ಸಾಗಲಿಲ್ಲ. ಪ್ರವಾಸಿ ಕಥನ ಹಿಡಿದು ಕೂತೆ. ಮತ್ತೊಮ್ಮೆ ಗತ ಕಾಲಕ್ಕೆ ಹೋಗಿ ಬಂದಂತಾಯಿತು. ನಂತರ ಇದ್ದಕ್ಕಿದ್ದಂತೆ ಎಷ್ಟೋ ಹಳೆಯ ದುಃಖವೆಲ್ಲ ದುಮ್ಮುಕ್ಕಿ ಬರುವಂತೆ ಅಳ ತೊಡಗಿದೆ. ನೆನಪುಗಳಿಗೆ ತಿಲಾಂಜಲಿ ಇಡುತ್ತಿದ್ದೆನೋ, ನನ್ನ ಮಬ್ಬು ತನಕ್ಕೆ ಮರುಗುತ್ತಿದ್ದೆನೋ ತಿಳಿಯದೆ, ನನ್ನನ್ನು ನಾನೇ ಮಗುವಂತೆ ಸಂತೈಸ ತೊಡಗಿದೆ. ಗೊಂದಲ ಶುರುವಾಗಿದ್ದು ಆಗ. ನಮಗೆ ಎರಡು ಮನಸ್ಸಿರುವುದೇ? ಒಂದು ಮನಸ್ಸು ಸರಿ ತಪ್ಪು ಗ್ರಹಿಸದೇ, ಇಷ್ಟ ಪಟ್ಟಿದ್ದು ಬೇಕೆಂದು ರಚ್ಚೆ ಹಿಡುವುದು( ಮಗುವಂತೆ) ಇನ್ನೊಂದು ಪ್ರಭುದ್ದವಾಗಿ ಯೋಚಿಸಿ, ಅದರಲ್ಲಿ ತಪ್ಪು ಕಂಡು ಹಿಡಿದು, ಸಮಾಧಾನಿಸುವುದು(ಅಮ್ಮನಂತೆ). ಇಲ್ಲಿ ಅಮ್ಮ ಬುದ್ದಿ ಹೇಳಿ ಹೇಳಿ ಸುಸ್ತಾಗಿ ಸುಮ್ಮನಾಯಿತು. ಆ ಮಗು ಅಳುತ್ತಲೇ ಇತ್ತು. ರಾತ್ರಿ ಎರಡಾಗಿರಬೇಕು. ಎಷ್ಟೊತ್ತಿಗೆ ನಿದ್ದೆ ಹತ್ತಿತೋ ದೆವರಿಗೆ ಗೊತ್ತು. ಬೆಳಗು ಯಾವಾಗಲೂ ಅಚ್ಚರಿಗಳ ಸಂಚು. ನಾವೇನೋ ಬಗೆವೆವು, ಆಗುವುದು ಇನ್ನೇನೊ. ಬೆಳಗ್ಗೆ ಎದ್ದಾಗ ನಿದ್ದೆಯ ಜೊಂಪು ಇನ್ನೂ ಇತ್ತು. ಮಲಗಲು ಸಮಯವಿರಲಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಬ್ಬರಿಗೂ ಅವರದೆ ಆದ ಪಾತ್ರ ಇರುವುದಾದರೆ, ಇವನಿಗಾವ ಪಾತ್ರ ಕೊಡಲಿ. ಹೇಳಬೇಕೆಂದ ಸಾವಿರ ಪದಗಳು ಯಾವುದೋ ಬೇಲಿಯ ಹಿಂದೆ ನರಳುತ್ತಿವೆ. ಆಗಾಗ ತಾಯಿ ಮಗುವಿನ ಸಂಭಾಷಣೆ ಕೇಳುವುದು. ಆ ಮುದ್ದು ಮಗುವಿಗೆ ತಿಳಿ ಹೇಳಲಾರದೆ ತಾಯಿ ಸೋತಿದ್ದಾಳೆ.

ರಾಧೆ...🎶

Comments

Popular posts from this blog