ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
(ಸಾಂದರ್ಭಿಕ ಚಿತ್ರ )


ವಾಸ್ತವಕ್ಕೆ ಹತ್ತಿರವಾದ ಕಥೆ:
ಅಮ್ಮ ತಿಂಡಿ ತಯಾರಿಸಿ, ಮೆಲುವಾಗಿ ಕರೆದಳು. ನಾನು ಬಾರಿ ಬಾರಿಗು ಸಿಹಿನಿದ್ದೆಗೆ ಜಾರುತ್ತಿದ್ದೆ. ಪ್ರತಿ ಸಲ ಎಚ್ಚರವಾದಾಗಲು ಈಗಷ್ಟೇ ಮಲಗುತ್ತಿರುವಂತೆ ಯಾವುದೇ ಹಿಂಸೆ ಇಲ್ಲದೆ ನಿದ್ದೆ ಬರುವುದು. ಅಲ್ಲಿಯ ಜಾಗದ ಮಹಿಮೆಯೇ ಸರಿ. ಅಮ್ಮ ಕರೆದುದ್ದಕ್ಕೆ ಚಾದರ ಹೊದ್ದೆ ಎದ್ದು ಕುಳಿತೆ. 'ಏಳೆ ಬಂಗಾರಿ' ಎಂದು ಲೈಟ್ ಹೊತ್ತಿಸಿ, ಕೆನ್ನೆಗೆ ಮುದ್ದಿಸಿದಳು. ಇನ್ನೆಂತ ಬೆಳಗು ಬೇಕು.. ಅವಳ ಕತ್ತಿಗೆ ಜೋತು ಬಿದ್ದು ಎದ್ದು ಬಂದೆ. ಬ್ರಷ್ ಹಿಡಿದು ಸೂರ್ಯ ಎಲ್ಲಾದರು ಕೃಪೆ ತೋರಿದ್ದಾನಾ ಎಂದು ಇಣುಕಿದೆ. ಅಂಗಳದ ತುತ್ತುದಿಯಲ್ಲಿ ಸ್ವಲ್ಪ ರಂಗು ಚೆಲ್ಲಿದ್ದ. ಅರಾಮಾಗಿ ಬಿದ್ದಿದ್ದ ಮೊಬೈಲ್ ಹಿಡಿದು ಅಡಿಕೆ ರಾಶಿಯ ಮೇಲೆ ನಡೆಯುತ್ತ ಎಳೆಬಿಸಿಲಲ್ಲಿ ಕುಳಿತೆ. ಮೊಬೈಲ್ ಅಲ್ಲೆ ಅಡಿಕೆ ರಾಶಿಯ ಮೇಲೆ ಇಟ್ಟು, ಹಲ್ಲುಜ್ಜುತ್ತಾ, ಅಯ್ಯೋ ಇನ್ನೆರಡೆ ದಿನ, ಯಾವ ಸ್ವಾರ್ಥಕ್ಕೆ ಆ ಮಾಯಾ ನಗರಿಯೋ, ಹಾಳಾದ ಜೀವನ. ಇಲ್ಲೇ ದನಮೇಯಿಸಿಕೊಂಡು ಇದ್ದರು ಎಷ್ಟು ಚೆಂದ ಎಂದು ನನ್ನ ಪ್ರೀತಿಯ ಗುಡ್ಡ-ಬೆಟ್ಟ ನೋಡುತ್ತ ಕೂತಿದ್ದೆ. ಅಮ್ಮ ಮತ್ತೆ ಕರೆದಳು, 'ದೋಸೆ ಕಾವಲಿ ಇಟ್ಟೆ, ರಂಗೋಲಿ ಹಾಕಿ ಬಾ'. ವಾಸ್ತವಕ್ಕೆ ಬಂದೆ. 'ಹಾ ಬಂದೆ' ಎಂದು ಅಡಿಕೆ ರಾಶಿ ಮೇಲೆ ಕುಣಿಯುತ್ತಾ ಒಳ ಸೇರಿದೆ. ಅಮ್ಮ ಬಾಗಿಲಲ್ಲೇ ರಂಗೋಲಿ ಬಟ್ಟಲಿಟ್ಟಿದ್ದಳು. ಮೊದಲ ಹಾಗೆ ಪಟ್ಟಿ ನೋಡಿ ಚುಕ್ಕೆ ಇಟ್ಟು ಬಿಡಿಸುವಷ್ಟು ವ್ಯವದಾನ ನನಗಿಲ್ಲ. ಈಗ ಚುಕ್ಕಿ ಇಟ್ಟಷ್ಟಕ್ಕೆ ಚಿತ್ತಾರ. ಅಮ್ಮ ಚೆನ್ನಾಗಿಯೇ ಬಿಡಿಸುವಳು. ಆದರೂ ನಾನು ಏನು ಬಿಡಿಸಿದೆ ಎಂದು ಖುಷಿಯಿಂದ ನೋಡುವಳು. ಅದರಲ್ಲೂ ಖುಷಿ ಪಡುವ ಮುದ್ದು ಜೀವ. 'ಮಗಾ ಚಟ್ನಿ ಇದೆ, ಜೇನು ತುಪ್ಪ- ತುಪ್ಪಾ ಬೇಕಾ?. ' ಗೊತ್ತವಳಿಗೆ, ಆದರೂ ಒಮ್ಮೆ ಕೇಳುವಳು. ನಾನು ದೇವರ ಒಳಗೆ ರಂಗೋಲಿ ಬಟ್ಟಲಿಟ್ಟು, ದೇವರಿಗೆ ನಮಸ್ಕರಿಸಿ, ಜೇನುತುಪ್ಪ ಎತ್ತಿಕೊಂಡು ಬಂದೆ. ಮತ್ತೇನಂದರೆ ನಮ್ಮನೆ ದೇವರು ತುಂಬಾ ಸಾದು. ಹೆಚ್ಚಾಗಿ ಏನನ್ನೂ ಕೇಳಲ್ಲಾ. ಅಷ್ಟರಲ್ಲಿ ಅಪ್ಪ ಬಂದ. 'ಇವತ್ತು ದೇವರು ಬರುತ್ತಂತೆ, ಯಾರೂ ಕೆಲಸಕ್ಕೆ ಬರಲ್ವಂತೆ. ಸಾಕಾಯ್ತು ಮಗಾ, ದಿನಾ ಅಕ್ಷತೆ ಕೊಟ್ಟು ಕೆಲಸಕ್ಕೆ ಕರ್ಕೊಂಡು ಬಂದು, ಹು ತಿಂಡಿ ಹಾಕು' ಎಂದು ಕುಳಿತರು. ನಾನು ಯಾವ ದೇವರು, ಎಲ್ಲಿ ಬರುತ್ತೆ ಎಂದು ತಿಳಿದು ಕೊಂಡೆ. ಶನಿ ದೇವರಂತೆ. ಹಾಗಾದರೆ ನಂದೆ ದೇವರು ಎಂದು ನಕ್ಕೆ. ತಿಂಡಿಯಾಯಿತು.
ನಾನು ಚಾಲಿ ಸುಲಿಯಲು ಕುಳಿತೆ. ಅಪ್ಪ ಧೂಳಾಗುತ್ತೆ, ಬೇಡ ಮಗಾ ಎಂದರು. ಹಾ ನಂಗೆ ಈಗ ಏನು ಆಗಲ್ಲಾ ಎಂದು ಕುಳಿತೆ. ಅಷ್ಟರಲ್ಲಿ ಮತ್ತೆ ೩-೪ ಜನ ಚಾಲಿ ಸುಲಿಯಲು ಬಂದರು. ಅಯ್ಯೋ ಪಾಪ ಅನ್ನಿಸಿತು. ಅಲ್ಲಿ ಕುಳಿತವರು ಒಂದೇ ಕುಟುಂಬದವರು. ಮಗಳು ಅಳಿಯನನ್ನು ಕಳಕೊಂಡು ಒಂದು ತಿಂಗಳಾಗಿರಬೇಕು. ಅಮ್ಮ ಮೊನ್ನೆ ಮೊನ್ನೆ ಫೋನ್ ಲಿ ಹೇಳಿದ ನೆನಪು.ಇಬ್ಬರು ಹೆಣ್ಣು ಮಕ್ಕಳು, ಅದೇ ಒಬ್ಬಳು ಗಂಡನನ್ನು ಕಳೆದುಕೊಂಡವಳು, ಇನ್ನೊಬ್ಬಳು ಗಂಡನನ್ನು ಬಿಟ್ಟವಳು ಎಂದು ಬಳಿಕ ತಿಳಿಯಿತು. ಗಂಡ ಸತ್ತವಳಿಗೆ ಒಂದೂವರೆ ವರ್ಷದ ಮಗಳು‌. ಮಗ ಬಂದಿರಲಿಲ್ಲ, ಶಾಲೆಗೆ ಹೋಗಿರುವನಂತೆ. ಆ ಮಗು ನೋಡಿದಾಗ ದೇವರೆಷ್ಟು ಕ್ರೂರಿ ಎನ್ನಿಸಿತು. ಅವಳ ಪಾಡಿಗೆ ಅವಳು ಆಡುತ್ತಿದ್ದಳು. ಆದರೆ ಅವರ್ಯಾರ ಮುಖದಲ್ಲೂ ದುಃಖದ ಛಾಯೆ ಕಂಡುಬರಲಿಲ್ಲ. ಎಷ್ಟು ಗಟ್ಟಿಗರಪ್ಪಾ ಎನ್ನಿಸಿತು. 'ಅಮ್ಮಾ ನಮ್ಮವರಿಗೆ ಯಾರಿಗಿದಾರೂ ಇಂತಹ ಪರಿಸ್ಥಿತಿ ಬಂದರೆ, ಸುಮಾರು ಒಂದು ವರ್ಷ ಅದೇ ಸೂತಕದ ಕಳೆ ಇರುತ್ತೆ, ಮಾತನಾಡಿಸಲು ಶಬ್ದಗಳ ತಕಲಾಟವಿರುತ್ತದೆ, ಆದರೆ ಇವರೆಷ್ಟು ಗಟ್ಟಿ ಅಲ್ವಾ' ಎಂದೆ. 'ಹು, ಒಂದು ವಾರಕ್ಕೆ ಇವರು ಹೀಗೆ ಇದ್ದಾರೆ' ಎಂದಳು.
' ಮತ್ತೊಬ್ಬಳು ಅಪ್ಪನ ಮನೆಗೆ ಬಂದಿದ್ದಾ?' ಕೇಳಿದೆ. 'ಇಲ್ಲಾ ಅವಳು ಗಂಡನನ್ನು ಬಿಟ್ಟಿದ್ದಾಳೆ' 'ಲವ್ ಮ್ಯಾರೇಜ್ ಅಲ್ವಾ?' 
'ಹಾ ಆಗ ಬಾರದ ಅವಧಿಲಿ ಆಗಬಾರದವನ್ನ ಯಾರ ಮಾತ ಕೇಳ್ದೆ ಆದ್ಲು, ಈಗ ಹೀಗೆ' 
'ಅಂದರೆ? ಮತ್ತೆ ಮಕ್ಕಳು?'
'ಅವಳ ಸ್ವಂತ ಚಿಕ್ಕಿ ಮಗನ್ನ ಮದ್ವೆ ಆದಳು. ಮಕ್ಕಳು.. ಎರಡು ಹೆಣ್ಣು ಆಗಿತ್ತು, ಒಂದು ಗಂಡನ ಜೊತೆ ಇದ್ದಾಗ್ಲೆ ಮಾರಿದಳು, ಇನ್ನೊಂದು ಗಂಡನನ್ನು ಬಿಟ್ಟ ಮೇಲೆ ಮಾರಿದಳು.'
'ಮಾರಿದಳು ಅಂದರೆ??!!!'
ಯಾರೋ ಡಾಕ್ಟರ್ ಫ್ಯಾಮಿಲಿ ದತ್ತು ತೆಗೆದುಕೊಂಡರು ಅಂತಾ ಹೇಳ್ತಾರಪ್ಪಾ.'
'ಅದ್ಯಾವ ಡಾಕ್ಟರ್ ಇರಬಹುದಪ್ಪಾ? ಅಲ್ಲಾ ಅಮ್ಮ ನಾನು ಚಿಕ್ಕವಳಿದ್ದಾಗ್ಲು ಇದೇ ಡೈಲಾಗ್ ಕೇಳಿದ್ದು. ಅದೆಷ್ಟು ಮಕ್ಕಳು ದತ್ತು ತೆಗೆದುಕೊತಾರೆ ಅವರು?!'
'ನಂಗೊತ್ತಿಲ್ಲ ಮಗಾ, ಕೆಲಸಾ ಇದೆ, ಈಗ ಆ ಕಥೆ ಬೇಡ.' ಎಂದು ಕೆಲಸಕ್ಕೆ ತೊಡಗಿದಳು. ನನ್ನ ತಲೆಯಲ್ಲಿ ಹುಳು ಬಿಟ್ಟಿತು. ಹೊರಗೆ ಬಂದೆ, 'ಅಕ್ಕಾ ಭಾವ ಸತ್ತು ತಿಂಗಳಾಯಿತು, ವಿಧವಾ ವೇತನ ಯಾವಾಗ ಬರೋದು? ಬಂದರೆ ಬೇಕಾದಂಗೆ ಸಾಕು ನೋಡು', ಎಂದವಳು ಮಾತು ಬದಲಿಸಿದಳು, ತಂಗಿ. ಅವಳ ಕತ್ತಲ್ಲಿ ತಾಳಿ ಇರಲಿಲ್ಲ. ನಾನು ಮೊದಲು ನೋಡುವಾಗ ಹೇಗಿದ್ದಳೊ ಹಾಗೆ ಇರುವಳು. ಯಾಕೋ ಮುಖ ನೋಡಲು ಅಸಹ್ಯ ಎನ್ನಿಸಿತು. ಅವಳು ಆಡುವ ಮಾತು ಕೇಳಬೇಕು. ಊರುಗೆಲ್ಲಾ ಬುದ್ದಿ ಹೇಳುವಳು. ಅವರಿಬ್ಬರೂ ದ್ವಿವಳಿ ಗಳಾಗಿರುವುದರಿಂದ ಗುರುತಿಸುವುದು ಕಷ್ಟ. ತಾಳಿ ಹಾಕಿರುವವಳು ಗಂಡ ಸತ್ತವಳು ಎಂದು ಗುರುತಿಟ್ಟುಕೊಂಡಿದ್ದೆ. ಅವರವರ ಜೀವನ ಅವರಿಗೆ, ನನಗ್ಯಾಕೆ ಎಂದು ಸುಮ್ಮನಾದೆ. ಆದರೆ ಪದೇ ಪದೇ ಬರುವ ಫೋನ್ ಕಾಲ್ ಕುತೂಹಲ ಕೆರಳಿಸಿತು. 'ಅಮ್ಮ ನಮಗ್ಯಾರಿಗು ಬರದಷ್ಟು ಕಾಲ್ ಇವಳೊಬ್ಬಳಿಗೆ ಬರತ್ತಲ್ಲಾ' ಎಂದೆ.
'ಈ ಗಂಡ ಬಿಟ್ಟವಳು ಇನ್ಯಾರನ್ನೋ ಲವ್ ಮಾಡ್ತಿದಾಳಂತೆ' ಎಂದಳು. ನಂತರ ಮಧ್ಯಾಹ್ನ ಊಟ ಮಾಡಿ ಅಕ್ಕ-ತಂಗಿ ಆಸ್ಪತ್ರೆಗೆ ಹೋಗಬೇಕು, ಮಗನಿಗೆ ತಲೆ ನೋವು ಹೇಳುತ್ತಿರುವ ಎಂದು ತರಾತುರಿಯಲ್ಲಿ ಜಾಗ ಖಾಲಿಮಾಡಿದರು. ಅವರೊಂದು ಸುಳ್ಳಿನ ಕಂತೆ. ಆಡುವ ಸಾಲುಗಳಿಗೆ ಸಂಬಂಧವೆ ಇರದು. ಮಾರನೆ ದಿನ ಅವರು ಬಂದಾಗ ಕಾಲ್ ಬಂತು. ಅಕ್ಕ ಬಿರುಬಿಸಿಲ್ಲಿ ದೂರದಲ್ಲಿ ಮಾತನಾಡುವುದು ಕಾಣುತ್ತಿತ್ತು. ತಾಯಿ ಕೂತಲ್ಲಿಂದ ಕೂಗಿದಳು, 'ರೇಟ್ ಫಿಕ್ಶ ಮಾಡ್ಸು'. ಯಾಕೋ ಕೆಟ್ಟದ್ದೆ ತಲೆಗೆ ಸುತ್ತ ತೊಡಗಿತು. ಮಧ್ಯಾಹ್ನ ಊಟ ಮುಗಿಸಿ ಕುಳಿತಿದ್ದರು. ಏನೋ ಮಕ್ಕಳು ಮರಿ ವಿಷಯ ಬಂತು. ನಾನು ಆ ತಂಗಿಗೆ ಕೇಳಿದೆ ' ನಿನಗೆ ಎಷ್ಟು ಮಕ್ಕಳು' ಎಂದು. 'ನನಗೆ ಮಕ್ಕಳಿಲ್ಲಾ' ಎಂದು ಮತ್ತೇನೊ ಕಥೆಯಲ್ಲಿ ಮುಳುಗಿದಳು. ಅಬ್ಬಾ!!! ಎನ್ನಿಸಿತು. ಹೆತ್ತವರು ಎಂದಾದರೂ ಮಕ್ಕಳಿಲ್ಲ ಎನ್ನಲು ಸಾಧ್ಯವೇ?? ನನ್ನ ಗಂಟಲು ಕಟ್ಟಿತು. ಕಷ್ಟ ಪಟ್ಟು ಆ ಪ್ರಶ್ನೆ ಕೇಳಿದ್ದೆ, ಉತ್ತರಿಸಿದರೆ, ಅವರ ಡಾಕ್ಟರ್ ಯಾರೆಂದು ಪತ್ತೆ ಹಚ್ಚ ಬಹುದೋ, ಅಥವಾ ಇನ್ನಷ್ಟು ಸುಳ್ಳು ಕಥೆ ಹೇಳಬಹುದೋ ಎಂಬ ಕಾರಣಕ್ಕೆ. ಆದರೆ ಯಾವುದೇ ಉತ್ತರ ಸಿಗಲಿಲ್ಲ. ಮತ್ತೆ ಕಾಲ್ ಬಂದಿತು. ಏನೇನೊ ಕಥೆ ಕಟ್ಟಿ ಜಾಗ ಖಾಲಿ ಮಾಡಿದರು. ಮಗನಿಗೆ 'ನಿನ್ನೆ ಡಾಕ್ಟರ್ ಹತ್ರ ತಂಗಿ ಕರೆದುಕೊಂಡು ಹೋಗಿದ್ವಲ್ಲಾ, ಅವರು ಮತ್ತೆ ಬರಹೇಳಿದ್ದಾರೆ' ಎಂದು ಪುಸಲಾಯಿಸಿ, ಅಜ್ಜಿ ಬಳಿ ಬಿಟ್ಟು, ಮಗಳನ್ನು ಎತ್ತಿಕೊಂಡು ಹೋದರು. ಕುರಿ ಕಡಿಯಲು ತೆಗೆದುಕೊಂಡು ಹೊರಟಂತೆ ಭಾಸವಾಯಿತು. ಭಾವನೆಗಳು ಸತ್ತ ಇಂತವರ ಹೊಟ್ಟೆಯಲ್ಲಿ ಹುಟ್ಟುವ ಪಾಪ ಆ ಮುಗ್ದ ಜೀವಗಳೇನು ಮಾಡಿಹೆಯೊ. ಅವರ ಮುಖದಲ್ಲಿ, ಕುತಂತ್ರ,ಕುಟಿಲತೆಯ ಹೊದ್ದು ಮುಗ್ಧತೆ ಎದ್ದು ಕಾಣುತ್ತಿತ್ತು.
ನೆನಪಾಯಿತು, ನಾನು ಇಲ್ಲದಿದ್ದಾಗ ನಮ್ಮಮನೆಯಲ್ಲಿ ನಂದಿ, ಚಿನ್ನಿಯನ್ನು (ತುಂಟ ಆಕಳ ಕರುಗಳು, ನಾ ಬೆಳೆಸಿದ್ದು) ಬೇರೆಯವರಿಗೆ ಹೊಡೆದು ಕೊಡುತ್ತಿದ್ದರು.. ನಾನಿದ್ದರೆ ಹೋಗಗೊಡೆ ಎಂದು. ಈಗಲೂ ಅವರನ್ನು ನೆನಪಿಸಿಕೊಂಡು ಮುನಿಸಿಕೊಳ್ಳುವೆ ಅಪ್ಪನ ಮೇಲೆ. ಪ್ರಥ್ವಿ ಅಗಲಿಕೆ ಈಗಲೂ ನನಗೂ ಅಮ್ಮನಿಗೂ ಕಣ್ಣೀರಿಡಿಸುವುದು. ಸಾಕು ಪ್ರಾಣಿಗಳೇ ಇಷ್ಟು ಆಪ್ತವಾಗುವಾಗ, ಕರುಳ ಸಂಬಂಧ ಅಷ್ಟು ಹಗುರಾಗುವುದೇ??!! ನನ್ನ ಹೊಕ್ಕ ಪ್ರಶ್ನೆ ಬೆಳೆಯುತ್ತಲೆ ಇದೆ... ನಿಜವಾಗಿಯೂ ಆ ಕಂದಮ್ಮಗಳು ಒಳ್ಳೆಯ ನೆಲೆ ಕಂಡಿಹವೇ? ಅಥವಾ ಇವರು ದುಡ್ಡಿಗಾಗಿ ಎಲ್ಲಿಯೋ ಮಾರಿ, ಬಂದ ದುಡ್ಡಲ್ಲಿ ಮಜ ಮಾಡುತ್ತಿರುವರೇ????
ಒಳ್ಳೆಯದನ್ನೇ ಆಶಿಸೋಣ... ಆ ಮುಗ್ಧ ನಗು ಕಣ್ಮುಂದೆ ತೇಲಿಬರುತ್ತಿದೆ.

#Humantraffickingstillexist #developing countries are more prone to it#

ರಾಧೆ ... 🎶

Comments

Popular posts from this blog